• Feb 14, 2026
  • NPN Log
    ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾಗಿ ಅರ್ಜಿದಾರರು ವಾದಿಸಿದ್ದರೆ, ಶೇ.131ರಷ್ಟು ಆದಾಯ ಮೀರಿ ಆಸ್ತಿ ಗಳಿಕೆ ಕಂಡುಬಂದಿದೆ ಎಂದು ಲೋಕಾಯುಕ್ತ ಹೇಳಿದೆ. ಅಂತಿಮವಾಗಿ ಐಟಿ ಇಲಾಖೆಗೆ ಎಲ್ಲ ಆದಾಯ ಘೋಷಿಸಿದ್ದಾರೆಯೇ ಇಲ್ಲವೇ ಎಂದು ಫೆ.27ಕ್ಕೆ ಮಾಹಿತಿ ನೀಡಲು ಸೂಚಿಸಿ ತನಿಖೆಗೆ ತಡೆ ನೀಡಿ ಕೋರ್ಟ್ ಆದೇಶಿಸಿದೆ. ಬೆಂಗಳೂರು, ಫೆಬ್ರವರಿ 12: ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​​ಗೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ತಡೆ ನೀಡಿ ಆದೇಶಿಸಿದೆ. ಅರ್ಜಿದಾರರ ಪರ ವಾದಿಸಿದ್ದ ಹಿರಿಯ ವಕೀಲ ಸಿ.ಹೆಚ್.ಜಾಧವ್, ಆಸ್ತಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಘೋಷಣೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಆದರೆ ಲೋಕಾಯುಕ್ತ ಪರ ವಕೀಲ ಬಿ.ಬಿ.ಪಾಟೀಲ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಪರಿಶೀಲನೆಯಲ್ಲಿ ಶೇ.131ರಷ್ಟು ಆದಾಯ ಮೀರಿದ ಆಸ್ತಿ ಗಳಿಕೆ ಕಂಡುಬಂದಿದೆ. ಸರ್ದಾರ್ ಸರ್ಫರಾಜ್ ಖಾನ್, 2 ಕೋಟಿ 80 ಲಕ್ಷ ಕೃಷಿ ಆದಾಯ ಘೋಷಿಸಿಕೊಂಡಿದ್ದಾರೆ. ಆದರೆ ಅದಕ್ಕೆ ಆಧಾರ ಒದಗಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಐಟಿ ಇಲಾಖೆಗೆ ಎಲ್ಲ ಆದಾಯ ಘೋಷಿಸಿದ್ದಾರೆಯೇ ಇಲ್ಲವೇ ಎಂದು ಫೆ.27ಕ್ಕೆ ಮಾಹಿತಿ ನೀಡಲು ಸೂಚಿಸಿ ತನಿಖೆಗೆ ತಡೆ ನೀಡಿ ಆದೇಶಿಸಿದೆ. ಸರ್ದಾರ್ ಸರ್ಫರಾಜ್ ಖಾನ್ ನಿವಾಸದಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು, 14.38 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಮಾಡಿದ್ದರು. 8.44 ಕೋಟಿ ರೂ. ಮೌಲ್ಯ ಸ್ಥಿರಾಸ್ತಿ ಮತ್ತು 5.93 ಕೋಟಿ ರೂ. ಮೊತ್ತದ ಚರಾಸ್ತಿ ದಾಳಿ ವೇಳೆ ಪತ್ತೆಯಾಗಿದೆ. 4 ವಾಸದ ಮನೆ ಮತ್ತು 35 ಎಕರೆ ಕೃಷಿ ಜಮೀನು ದಾಖಲೆ, 66,500 ಹಣ, 2.99 ಲಕ್ಷ ಮೌಲ್ಯದ ಚಿನ್ನ, 1.29 ಕೋಟಿ ಎಫ್​ಡಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿತ್ತು. ಬೆಂಗಳೂರಿನ ಹಲಸೂರು ನಿವಾಸ, ಇತರ ಆರು ಮನೆಗಳು ಸೇರಿದಂತೆ ಒಟ್ಟು ಏಳು ಮನೆಗಳು, ಕೊಡಗಿನಲ್ಲಿರುವ ಎರಡು ಕಾಫಿ ಎಸ್ಟೇಟ್‌ಗಳು ಮತ್ತು ಹೆಚ್.ಡಿ.ಕೋಟೆಯಲ್ಲಿನ ಒಂದು ರೆಸಾರ್ಟ್ ಒಳಗೊಂಡು ಸರ್ಫರಾಜ್ ಖಾನ್​​ಗೆ​​ ಸೇರಿದ ಒಟ್ಟು 13 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಸರ್ದಾರ್ ಸರ್ಫರಾಜ್ ಖಾನ್ ವಸತಿ ಇಲಾಖೆಗೆ ನಿಯೋಜನೆಗೊಂಡಿರುವ ಅಧಿಕಾರಿಯಾಗಿದ್ದು, ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿ.24 ಬೆಳ್ಳಂ ಬೆಳಿಗ್ಗೆ 50ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಎಲ್ಲಾ ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಆಸ್ತಿ ವಿವರಗಳ ಸಂಗ್ರಹ ಕಾರ್ಯ ನಡೆಸಿದ್ದರು.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion