• Feb 14, 2026
  • NPN Log
    New IT rules from 2026 Feb 20th: ಡೀಪ್​ಫೇಕ್ ಇತ್ಯಾದಿ ಎಐ ಸೃಷ್ಟಿತ ವಿಡಿಯೋ ಮತ್ತು ಇಮೇಜ್​ಗಳಿಂದ ಜನರಿಗೆ ತಪ್ಪು ತಿಳಿವಳಿಕೆ ಉಂಟಾಗುವುದನ್ನು ತಪ್ಪಿಸಲು ಸರ್ಕಾರ ಹೊಸ ಐಟಿ ನಿಯಮಗಳನ್ನು ರೂಪಿಸಿದೆ. ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಜನರು ಕಂಟೆಂಟ್ ಅಪ್​ಲೋಡ್ ಮಾಡುವ ಮುನ್ನ, ಅದು ಎಐ ಜನರೇಟೆಡ್ ಕಂಟೆಂಟಾ ಅಥವಾ ಅಲ್ಲವಾ ಎಂಬುದನ್ನು ಘೋಷಿಸಬೇಕು. ಪ್ಲಾಟ್​ಫಾರ್ಮ್​ಗಳೂ ಕೂಡ ಆಟೊಮೇಟೆಡ್ ಟೂಲ್​ಗಳನ್ನು ಬಳಸಿ ಅವನ್ನು ಪತ್ತೆ ಮಾಡಬೇಕು ಎಂದು ಹೊಸ ನಿಯಮಗಳು ಹೇಳುತ್ತವೆ. ನವದೆಹಲಿ, ಫೆಬ್ರುವರಿ 11: ಎಐ ಸೃಷ್ಟಿದ ಫೋಟೋ, ವಿಡಿಯೋಗಳು (AI generated content) ಥೇಟ್ ನೈಜ ವ್ಯಕ್ತಿ ಮತ್ತು ಸ್ಥಳದ್ದೇ ಎನಿಸುವಂತಿರುತ್ತವೆ. ಯಾವುದು ಅಸಲಿ, ಯಾವುದು ಕೃತಕ ಎಂದು ಮೇಲ್ನೋಟಕ್ಕೆ ಕಂಡು ಹಿಡಿಯುವುದು ಕಷ್ಟ. ದುರುಳರು ಈ ಎಐ ಅನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ. ಇದನ್ನು ನಿಯಂತ್ರಿಸಲು ಸರ್ಕಾರವು ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ರೂಪಿಸಿದೆ. ಡೀಪ್​ಫೇಕ್ ವಿಡಿಯೋ, ಸಿಂಥೆಟಿಕ್ ಆಡಿಯೋ, ತಿರುಚಿದ ದೃಶ್ಯಗಳು ಇತ್ಯಾದಿ ಎಐ ಸೃಷ್ಟಿದ ಕಂಟೆಂಟ್ ಅನ್ನು ಐಟಿ ನಿಯಮಗಳಡಿ ತರಲಾಗಿದೆ. ಫೆಬ್ರುವರಿ 20ರಿಂದ ಹೊಸ ನಿಯಮಗಳು ಜಾರಿಗೆ ಬರುತ್ತವೆ. ಎಐ ಕಂಟೆಂಟ್ ಎಂದು ನೋಡಿದ ಕೂಡಲೇ ಗೊತ್ತಾಗಬೇಕು… ಫೇಸ್​ಬುಕ್ ಇತ್ಯಾದಿ ಪ್ಲಾಟ್​ಫಾರ್ಮ್​ಗಳು ತಮ್ಮಲ್ಲಿ ಅಪ್​ಲೋಡ್ ಆಗುವ ಕಂಟೆಂಟ್​ಗಳು ಸಿಂಥೆಟಿಕ್ ಆಗಿದ್ದರೆ ಅದು ಗೊತ್ತಾಗುವ ರೀತಿಯಲ್ಲಿ ಲೇಬಲ್ ಆಗಿರಬೇಕು. ಮೆಟಾಡಾಟಾ ಮತ್ತು ಯೂನಿಕ್ ಐಡೆಂಟಿಫೈರ್​ಗಳನ್ನು ಎಂಬೆಡ್ ಮಾಡಬೇಕು. ಒಟ್ಟಿನಲ್ಲಿ, ಸೋಷಿಯಲ್ ಮೀಡಿಯಾ ಮತ್ತು ವೆಬ್​ಸೈಟ್​ಗಳಲ್ಲಿ ಸಿಂಥೆಟಿಕ್ ಕಂಟೆಂಟ್ ಅಪ್​ಲೋಡ್ ಆಗಿದ್ದರೆ, ಅದು ನೋಡುಗರಿಗೆ ಸ್ಪಷ್​ಟವಾಗಿ ಗೊತ್ತಾಗುವಂತಿರಬೇಕು ಎಂಬುದು ಆಶಯ. ಸಿಂಥೆಟಿಕ್ ಅಥವಾ ಎಐ ಜನರೇಟೆಡ್ ಕಂಟೆಂಟ್ ಯಾವುವು? ನೈಜವೆನಿಸುವ ರೀತಿಯಲ್ಲಿ ಕಂಪ್ಯೂಟರ್ ಬಳಸಿ ಯಾವುದೇ ಧ್ವನಿ ಅಥವಾ ದೃಶ್ಯವನ್ನು ಸೃಷ್ಟಿಸಿದ್ದರೆ ಅಥವಾ ಬದಲಾಯಿಸಿದ್ದರೆ ಅಂಥದ್ದನ್ನು ಸಿಂಥೆಟಿಕ್ ಆಗಿ ಸೃಷ್ಟಿಸಿದ ಮಾಹಿತಿ ಎಂದು ವ್ಯಾಖ್ಯಾನಿಸಲಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ, ಫೋಟೋ ಅಥವಾ ವಿಡಿಯೋದಲ್ಲಿ ಮಾಡಲಾಗುವ ಎಲ್ಲಾ ಬದಲಾವಣೆಗಳೂ ಇದಕ್ಕೆ ಒಳಪಡುವುದಿಲ್ಲ. ಉದಾಹರಣೆಗೆ, ಫೋಟೋ ಅಥವಾ ವಿಡಿಯೋದಲ್ಲಿ ಕಲರ್ ಕರೆಕ್ಷನ್, ಬ್ರೈಟ್ನೆಸ್ ಹೊಂದಾಣಿಕೆ, ನಾಯ್ಸ್ ಕರೆಕ್ಷನ್ ಇತ್ಯಾದಿ ಮಾಡಿದರೆ ಸಮಸ್ಯೆ ಇರುವುದಿಲ್ಲ. ಬಳಕೆದಾರರಿಗೆ ಜವಾಬ್ದಾರಿ… ಸೋಷಿಯಲ್ ಮೀಡಿಯಾ ಬಳಕೆದಾರರು ತಾವು ಅಪ್​ಲೋಡ್ ಮಾಡುವ ಕಂಟೆಂಟ್ ಎಐ ಸೃಷ್ಟಿತವಾಗಿದ್ದರೆ ಅದನ್ನು ನಮೂದಿಸಬೇಕು. ಇವರು ಕಂಟೆಂಟ್ ಅನ್ನು ಅಪ್​ಲೋಡ್ ಮಾಡುವ ಮುನ್ನ ಅದು ಎಐ ಜನರೇಟೆಡ್ ಹೌದಾ ಅಲ್ಲವಾ ಎಂಬುದನ್ನು ಪ್ಲಾಟ್​ಫಾರ್ಮ್​ಗಳು ಕೇಳಬೇಕು. ಫೇಸ್ಬುಕ್​ನಲ್ಲಿ ಯಾರಾದರೂ ಫೋಟೋ ಅಪ್ಲೋಡ್ ಮಾಡುವಾಗ ಇದನ್ನು ಘೋಷಿಸಬೇಕು. ಇಷ್ಟು ಮಾತ್ರವಲ್ಲ, ಯಾರಾದರೂ ಉದ್ದೇಶಪೂರ್ವಕವಾಗಿಯೋ ಅಥವಾ ಆಕಸ್ಮಿಕವಾಗಿಯೋ ಎಐ ಸೃಷ್ಟಿತ ಕಂಟೆಂಟ್ ಅನ್ನು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಹಾಕುವ ಸಾಧ್ಯತೆ ಇರುವುದರಿಂದ, ಆಟೊಮೇಟ್ ಟೂಲ್​ಗಳ ಮೂಲಕ ಅವುಗಳ ಕ್ರಾಸ್ ವೆರಿಫಿಕೇಶನ್ ಮಾಡಬೇಕು ಎನ್ನುತ್ತದೆ ನಿಯಮ. ಪ್ಲಾಟ್​ಫಾರ್ಮ್​ಗಳಿಗೆ ಕಡಿಮೆ ಸಮಯಾವಕಾಶ… ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ನಿರ್ದಿಷ್ಟ ಕಂಟೆಂಟ್ ಅನ್ನು ತೆಗೆದುಹಾಕಲು ಕಾನೂನಿನ ಆದೇಶ ಬಂದರೆ ಅದನ್ನು ಪಾಲಿಸಲು 36 ಗಂಟೆ ಇದ್ದ ಕಾಲಾವಕಾಶದ ಅವಧಿಯನ್ನು 3 ಗಂಟೆಗೆ ಇಳಿಸಲಾಗಿದೆ. 15 ದಿನಗಳಿದ್ದ ಕಾಲಾವಕಾಶವನ್ನು ಏಳು ದಿನಕ್ಕೆ ಇಳಿಸಲಾಗಿದೆ. 24 ಗಂಟೆ ಇದ್ದ ಡೆಡ್​ಲೈನ್ ಅನ್ನು 12 ಗಂಟೆಗೆ ಇಳಿಸಲಾಗಿದೆ. ಇವು ಕೂಡ ಕ್ರಿಮಿನಲ್ ಅಪರಾಧಗಳೇ… ಮಕ್ಕಳ ಲೈಂಗಿಕ ದುರ್ಬಳಕೆಯ ಸರಕುಗಳು, ಅಶ್ಲೀಲ ಕಂಟೆಂಟ್, ನಕಲಿ ಎಲೆಕ್ಟ್ರಾನಿಕ್ ರೆಕಾರ್ಡ್​ಗಳು, ನೈಜ ವ್ಯಕ್ತಿಯನ್ನು ಹೋಲುವ ಡೀಪ್​ಫೇಕ್​ಗಳು ಮತ್ತು ನಕಲಿ ಧ್ವನಿಗಳನ್ನು ಸೃಷ್ಟಿಸಿದರೆ ಅದು ಭಾರತೀಯ ನ್ಯಾಯ ಸಂಹಿತೆ, ಪೋಕ್ಸೋ ಕಾಯ್ದೆ ಅಡಿಯಲ್ಲಿನ ಅಪರಾಧವಾಗುತ್ತದೆ ಎಂದು ಹೊಸ ಐಟಿ ನಿಯಮಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion