“ಸಾವಿನಲ್ಲೂ ಕಾಸು ಕೇಳುವ ನೀಚತನ” ಎಂದು ಬಿಜೆಪಿ ಕಿಡಿ
ಹಿರಿಯ ಪತ್ರಕರ್ತ ರಾಮಯ್ಯನವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸುವುದಾಗಿ ಘೋಷಿಸಿದ್ದ ಕರ್ನಾಟಕ ಸರ್ಕಾರ, ಇದೀಗ ಅಂತ್ಯಸಂಸ್ಕಾರದ ಖರ್ಚು ವೆಚ್ಚದ ಬಿಲ್ ಅನ್ನು ರಾಮಯ್ಯನವರ ಕುಟುಂಬಕ್ಕೆ ಕಳುಹಿಸಿದೆ ಎನ್ನಲಾಗುತ್ತಿದೆ. ಸದ್ಯ ಈ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದೆ.
ಸರ್ಕಾರಿ ಗೌರವಕ್ಕೆ ತಗುಲಿದ ವೆಚ್ಚ ಪಾವತಿಸುವಂತೆ ದಿ ರಾಮಯ್ಯ ಕುಟುಂಬಕ್ಕೆ ಸರ್ಕಾರ ಬಿಲ್? ಅಶೋಕ್ ಕಿಡಿ
ಬೆಂಗಳೂರು, ಫೆಬ್ರವರಿ 14: ರಾಜ್ಯ ಕಾಂಗ್ರೆಸ್ (congress) ಸರ್ಕಾರ ಒಂದು ಸಾವಿರ ದಿನ ಪೂರೈಸಿದ ಸಂಭ್ರಮದಲ್ಲಿದೆ. ಸರ್ಕಾರದ ಘಟಾನುಘಟಿಗಳು ಇಂದು ಹಾವೇರಿಯಲ್ಲಿ ಅಬ್ಬರಿಸಿದರು. ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದ ಹೆಸರಿನಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಈ ಮಧ್ಯೆ ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ರಾಮಯ್ಯನವರ ಕುಟುಂಬಸ್ಥರಿಗೆ ಬಿಲ್ ನೀಡಿದೆ ಎನ್ನಲಾಗುತ್ತಿದ್ದು, ಸುದ್ದಿ ಹರಿದಾಡುತ್ತಿದೆ. ಇದು ನಿಜವೇ ಆದರೆ, ಕಾಂಗ್ರೆಸ್ ಸರ್ಕಾರದಂತಹ ಲಜ್ಜೆಗೇಡಿ ಸರ್ಕಾರ ಮತ್ತೊಂದಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashoka) ವಾಗ್ದಾಳಿ ಮಾಡಿದ್ದಾರೆ.
ದಿವಂಗತ ರಾಮಯ್ಯನವರ ಕುಟುಂಬಕ್ಕೆ ಬಿಲ್?
ಈ ಬಗ್ಗೆ ಟ್ವೀಟ್ ಮಾಡಿರುವ ಆರ್. ಅಶೋಕ್, ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತರು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ರಾಮಯ್ಯನವರ ಅಂತ್ಯಸಂಸ್ಕಾರವನ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವುದಾಗಿ ಘೋಷಣೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಸರ್ಕಾರಿ ಗೌರವಕ್ಕೆ ತಗುಲಿದ ಖರ್ಚು ವೆಚ್ಚ ಪಾವತಿಸುವಂತೆ ದಿವಂಗತ ರಾಮಯ್ಯನವರ ಕುಟುಂಬಕ್ಕೆ ಬಿಲ್ ಕಳುಹಿಸಿರುವ ಘಟನೆ ನಾಡಿನ ಹಿರಿಯ ಪತ್ರಕರ್ತರಿಗೆ ಮಾಡಿರುವ ಅಪಮಾನದ ಜೊತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ಮಟ್ಟಕ್ಕೆ ದಿವಾಳಿ ಆಗಿದೆ, ಎಷ್ಟು ಲಜ್ಜೆಗೆಟ್ಟ ಸ್ಥಿತಿಗೆ ತಲುಪಿದೆ ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಆರ್. ಅಶೋಕ್ ಟ್ವೀಟ್
ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರೇ, ಶ್ರೀ ರಾಮಯ್ಯನವರ ಅಂತ್ಯಸಂಸ್ಕಾರದ ವೇಳೆ ಗಣ್ಯ ವ್ಯಕ್ತಿಗಳ ಭೇಟಿಗೆ ನಡೆಸಿದ ಸಿದ್ಧತೆಗಳು, ಬ್ಯಾರಿಕೇಡ್ ಅಳವಡಿಕೆ, ಭದ್ರತಾ ವ್ಯವಸ್ಥೆ ಮತ್ತು ಇತರ ಲಾಜಿಸ್ಟಿಕ್ ಸಿದ್ಧತೆಗಳಿಗೆ ಹಣ ಪಾವತಿಸುವಂತೆ ನಿಮ್ಮ ಪೊಲೀಸ್ ಇಲಾಖೆ ಓರ್ವ ವ್ಯಾಪಾರಿಯ ಮೂಲಕ ರಾಮಯ್ಯನವರ ಕುಟುಂಬಸ್ಥರಿಗೆ ಬಿಲ್ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜವೇ ಆದರೆ, ನಿಮ್ಮ ಕಾಂಗ್ರೆಸ್ ಸರ್ಕಾರದಂತಹ ಲಜ್ಜೆಗೇಡಿ ಸರ್ಕಾರ ಮತ್ತೊಂದಿಲ್ಲ ಎಂದಿದ್ದಾರೆ.
ಸಾವಿನಲ್ಲೂ ಕಾಸು ಕೇಳುವ ನೀಚತನಕ್ಕೆ ಇಳಿದಿದೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
ಬಿಜೆಪಿ ಕೂಡ ಟ್ವೀಟ್ ಮಾಡಿದ್ದು, ಸಾವಿರ ದಿನದ ಕಾಂಗ್ರೆಸ್ ಸರ್ಕಾರ ಸಾವಿನಲ್ಲೂ ಕಾಸು ಕೇಳುವ ನೀಚತನಕ್ಕೆ ಇಳಿದಿದೆ. ಹಿರಿಯ ಪತ್ರಕರ್ತ, ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯನವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸುವುದಾಗಿ ಬರುಡೆ ಬಿಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ ಇದೀಗ ಹಿಂಬಾಗಿಲಿನಿಂದ ಅವರ ಕುಟುಂಬಸ್ಥರಿಗೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿರುವುದಕ್ಕೆ ಪೊಲೀಸ್ ಇಲಾಖೆ ಬಿಲ್ ಕಳುಹಿಸಿದೆ.
ಮಿಸ್ಟರ್ ಗೊತ್ತಿಲ್ಲ ಹೋಮ್ ಮಿನಿಸ್ಟರ್ ಡಾ. ಜಿ ಪರಮೇಶ್ವರ್ ಅವರೇ, ಇದು ನಿಮಗೆ ಗೊತ್ತಿಲ್ಲವೇ? ಅಥವಾ ನಿಮ್ಮ ಸರ್ಕಾರ ಸಾವಿರದ ದಿನಕ್ಕೆ ಇಷ್ಟೊಂದು ಪಾಪರ್ ಆಗಿದೆಯೇ? ಎಂದು ಕಿಡಿಕಾರಿದೆ.











Comments