• Feb 14, 2026
  • NPN Log
    ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ 7.6 ಮಿಲಿಯನ್ ವೀಕ್ಷಣೆ ಪಡೆದಿದೆ. ಮೂರೇ ದಿನಕ್ಕೆ ಈ ಪರಿ ವೀಕ್ಷಣೆ ಕಾಣುವ ಮೂಲಕ ‘ಅನಿಮಲ್’ ಮತ್ತು ‘ಪುಷ್ಪ 2’ ದಾಖಲೆಗಳನ್ನು ಮುರಿದಿದೆ. ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕ ಜಾಗತಿಕ ಮಟ್ಟದಲ್ಲಿ ‘ಧುರಂಧರ್’ ಚಿತ್ರ ಸದ್ದು ಮಾಡುತ್ತಿದೆ. ಕಳೆದ ವರ್ಷಾಂತ್ಯಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಧುರಂಧರ್’ ಈಗ ಒಟಿಟಿ (OTT) ಲೋಕದಲ್ಲೂ ಅಧಿಪತ್ಯ ಸಾಧಿಸಿದೆ. ಜನವರಿ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ (Netflix) ಬಿಡುಗಡೆಯಾದ ಈ ಸಿನಿಮಾ, ಕೇವಲ ಒಂದೇ ವಾರದಲ್ಲಿ ಭಾರತದ ಅತಿದೊಡ್ಡ ಹಿಟ್ ಚಿತ್ರಗಳಾದ ‘ಅನಿಮಲ್’, ‘ಫೈಟರ್’ ಮತ್ತು ‘ಪುಷ್ಪ 2: ದಿ ರೂಲ್’ ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಿ ಹೊಸ ಇತಿಹಾಸ ಸೃಷ್ಟಿಸಿದೆ. ಆ ಮೂಲಕ, ರಣವೀರ್ ಸಿಂಗ್ ನಟನೆಯ ಈ ಸಿನಿಮಾ ಚಿತ್ರಮಂದಿರದಲ್ಲಿ ಮಾತ್ರವಲ್ಲದೇ ಒಟಿಟಿಯಲ್ಲೂ ಸೂಪರ್ ಹಿಟ್ ಆಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ‘ಧುರಂಧರ್’ ಬರೋಬ್ಬರಿ 7.6 ಮಿಲಿಯನ್ ವೀಕ್ಷಣೆಗಳನ್ನು ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಭಾರತದ ಪೋಸ್ಟ್-ಥಿಯೇಟ್ರಿಕಲ್ ಡಿಜಿಟಲ್ ಬಿಡುಗಡೆಯ ಇತಿಹಾಸದಲ್ಲೇ ಮೊದಲ ವಾರಾಂತ್ಯದಲ್ಲಿ 7 ಮಿಲಿಯನ್ ಗಡಿ ದಾಟಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಈ ಹಿಂದೆ ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ 6.2 ಮಿಲಿಯನ್ ವೀಕ್ಷಣೆಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಹೃತಿಕ್ ರೋಷನ್ ಅವರ ‘ಫೈಟರ್’ (5.9 ಮಿಲಿಯನ್) ಮತ್ತು ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ (5 ಮಿಲಿಯನ್) ನಂತರದ ಸ್ಥಾನಗಳಲ್ಲಿದ್ದವು. ಇದೀಗ ‘ಧುರಂಧರ್’ ಈ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದೆ. ಅಂಕಿಅಂಶಗಳ ಪ್ರಕಾರ, ಏಳು ದೇಶಗಳಲ್ಲಿ ನೆಟ್‌ಫ್ಲಿಕ್ಸ್‌ನ ‘ಟಾಪ್ 10’ ಇಂಗ್ಲಿಷೇತರ ಸಿನಿಮಾಗಳ ಪಟ್ಟಿಯಲ್ಲಿ ‘ಧುರಂಧರ್’ ಮೊದಲ ಸ್ಥಾನದಲ್ಲಿದೆ. ವಿಶೇಷವೆಂದರೆ, ಪಾಕಿಸ್ತಾನದಲ್ಲಿ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ನಿಷೇಧ ಹೇರಲಾಗಿದ್ದರೂ, ಅಲ್ಲಿನ ಒಟಿಟಿ ಟ್ರೆಂಡಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಈವರೆಗೆ ಜಾಗತಿಕವಾಗಿ ಈ ಚಿತ್ರವು 26.1 ಮಿಲಿಯನ್ ಗಂಟೆಗಳ ವೀಕ್ಷಣೆಯನ್ನು ಕಂಡಿದೆ. ‘ಧುರಂಧರ್’ ಚಿತ್ರದ ಯಶಸ್ಸಿನ ನಂತರ ಅಭಿಮಾನಿಗಳು ಇದರ ಎರಡನೇ ಭಾಗ ‘ಧುರಂಧರ್: ದಿ ರಿವೇಂಜ್’ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈ ಸೀಕ್ವೆಲ್ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಕೂಡ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಹಣಾಹಣಿ ನಡೆಯುವ ಸಾಧ್ಯತೆ ಇದೆ.

    You Might Also Like

    Comments

    Leave A Comment

    Don’t worry ! Your email address will not be published. Required fields are marked (*).

    Get Newsletter

    Featured News

    Advertisement

    Voting Poll (Checkbox)

    Voting Poll (Radio)

    Readers Opinion